ಬ್ಯೂಲರ್, ಜಾರ್ಜ್
	1837-1898. ಭಾರತೀಯ ಸಂಸ್ಕøತಿಯ ಅಧ್ಯಯನವನ್ನು ಯೂರೋಪಿನಲ್ಲಿ ಪ್ರಚುರಪಡಿಸಿದ ವಿದ್ವಾಂಸ. ಪಾದ್ರಿಯ ಮಗನಾಗಿ 1837 ಜುಲೈ 19ರಂದು ಜನಿಸಿದ. ಆರಂಭದ ವಿದ್ಯಾಭ್ಯಾಸವನ್ನು ಹ್ಯಾನೋವರ್ ಸಾರ್ವಜನಿಕ ಶಾಲೆಯಲ್ಲೂ ಪ್ರೌಢ ವಿದ್ಯಾಭ್ಯಾಸವನ್ನು ಗಟೆಂಗೆನ್ ವಿಶ್ವವಿದ್ಯಾಲಯದಲ್ಲೂ ಮುಗಿಸಿ 1858ರಲ್ಲಿ ಲಂಡನ್ನಿಗೆ ಹೋದ. ಅಲ್ಲಿ ಮ್ಯಾಕ್ಸ್ ಮುಲರ್ ಎಂಬ ವಿದ್ವಾಂಸನನ್ನು ಭೇಟಿಯಾದ. ಅವನ ಶಿಫಾರಸ್ ಮೇರೆಗೆ ಮುಂಬಯಿಯ ಎಲ್ಫಿನ್‍ಸ್ಟನ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ನೇಮಕಗೊಂಡ. ಅನಂತರ 1880ರಲ್ಲಿ ವಿಯನ್ನಾ ವಿಶ್ವವಿದ್ಯಾಲಯದಲ್ಲಿ ಸಂಸ್ಕøತ ಮತ್ತು ಭಾರತೀಯ ಪ್ರಾಚೀನ ಸಂಸ್ಕøತಿಯ ಪ್ರಾಧ್ಯಾಪಕನಾದ ಅಲ್ಲಿ ಎನ್‍ಸೈಕ್ಲೋಪೀಡಿಯಾ ಆಫ್ ಇಂಡೊ-ಆರ್ಯನ್ ರಿಸರ್ಚ್ ಎಂಬ ಬೃಹತ್ ಯೋಜನೆ ರೂಪಿಸಿ ಮುವ್ವತ್ತು ಜನ ವಿದ್ವಾಂಸರ ನೆರವಿನಿಂದ ಈ ಸಂಪುಟದ ಒಂಬತ್ತು ಭಾಗಗಳನ್ನು ಹೊರತಂದ. ಇದರಲ್ಲಿ ಈತ ಬರೆದ ಇಂಡಿಯನ್ ಪ್ಯಾಲಿಯೋಗ್ರಫಿ ಎಂಬ ಗ್ರಂಥವೂ ಸೇರಿದೆ. ಕಂಪ್ಯಾರೆಟಿವ್ ಫಿಲಾಲಜಿ ಮತ್ತು ವೇದಿಕ್ ಮೈಥಾಲಜಿ ವಿಷಯದಲ್ಲಿ ಅನೇಕ ಲೇಖನಗಳನ್ನು ಈತ ಓರಿಯಂಟ್ ಅಂಡ್ ಆಕ್ಸಿಡೆಂಟ್ ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದ್ದಾನೆ. ಪುಣೆಯಲ್ಲಿದ್ದ ವಿದ್ವಾಂಸ ಕೀಲ್ ಹಾರನ್ ಎಂಬಾತನ ಜೊತೆಯಲ್ಲಿ ಈತ ಬಾಂಬೆ ಸಂಸ್ಕøತ ಮಾಲೆಯನ್ನು ಪ್ರಾರಂಭಿಸಿದ. ಭಾರತೀಯ ಯುವ ವಿದ್ವಾಂಸರಿಗೆ ಪಾಶ್ಚಾತ್ಯರೀತಿಯಲ್ಲಿ ಗ್ರಂಥ ಸಂಪಾದನೆ ಕಲಿಸುವುದು ಮತ್ತು ಶಾಲಾಕಾಲೇಜುಗಳಿಗೆ ಅಗ್ಗದ ಬೆಲೆಯ ಹಾಗೂ ಪ್ರಮಾಣೀಭೂತ ಪಠ್ಯ ಪುಸ್ತಕಗಳನ್ನು ಒದಗಿಸುವುದು ಈ ಮಾಲೆಯ ಉದ್ದೇಶವಾಗಿತ್ತು. ಈ ಮಾಲೆಯಲ್ಲಿ ಈತ ಪಂಚತಂತ್ರದ ನಾಲ್ಕು ಪುಸ್ತಕಗಳು ಮತ್ತು ದಂಡಿಯ ದಶಕುಮಾರ ಚರಿತೆಯ ಮೊದಲನೆಯ ಭಾಗ ಸಂಪಾದಿಸಿದ. 1875ರಲ್ಲಿ ತಾನೇ ಪತ್ತೆ ಹಚ್ಚಿದ ಬಿಲ್ಹಣ ವಿಕ್ರಮಾಂಕದೇವ ಚರಿತವನ್ನು ಬೆಳಕಿಗೆ ತಂದ. ಸರ್ ರೇಮಂಡ್ ವೆಸ್ಟ್ ಎಂಬ ವಿದ್ವಾಂಸನ ಸಹಾಯದಿಂದ ಡೈಜಸ್ಟ್ ಆಫ್ ಹಿಂದೂ ಲಾ (ಹಿಂದೂಧರ್ಮ ಸಂಹಿತೆ) ಎಂಬ ಕೃತಿಯನ್ನು 1867ರಲ್ಲಿ ಪ್ರಕಟಿಸಿದ. ಮ್ಯಾಕ್ಸ್‍ಮುಲರ್ ಸಂಪಾದಿಸುತ್ತಿದ್ದ ಸೇಕ್ರೆಡ್ ಬುಕ್ಸ್ ಆಫ್ ದಿ ಈಸ್ಟ್ ಎಂಬ ಮಾಲೆಯಲ್ಲಿ ಈತ ಮನುಧರ್ಮಶಾಸ್ತ್ರವನ್ನು ಇಂಗ್ಲಿಷಿಗೆ ಭಾಷಾಂತರಿಸಿದ್ದಾನೆ.

	ಬ್ಯೂಲರ್‍ಗೆ ಸಂಸ್ಕøತ ಸಾಹಿತ್ಯ ಚರಿತ್ರೆಯಲ್ಲಿಯೂ ಅಪಾರ ಆಸಕ್ತಿಯಿತ್ತು. ಅದಕ್ಕಾಗಿ ಈತ ಆಳವಾದ ಶಾಸನಾಧ್ಯಯನ ಕೈಗೊಂಡ; ಅನೇಕ ಲೇಖನಗಳನ್ನು ಪ್ರಕಟಿಸಿದ. ಭಾರತದ ಚಾರಿತ್ರಿಕ ದಾಖಲೆಗಳ ವಿಚಾರದಲ್ಲಿ ಈತ ಇಂಡಿಯನ್ ಅಂಟಿಕ್ವೆರಿ ಎಂಬ ವಿದ್ವತ್ ಪತ್ರಿಕೆಯಲ್ಲಿ ಸುಮಾರು 85ಕ್ಕೂ ಹೆಚ್ಚು ಲೇಖನ ಪ್ರಕಟಿಸಿದ್ದಾನೆ. ಇಂಡಿಯನ್ ಬ್ರಾಹ್ಮೀ ಆಲ್ಫಬೆಟ್, ಇಂಡಿಯನ್ ಪ್ಯಾಲಿಯೋಗ್ರಫಿ ಇವು ಇವನ ಎರಡು ಉದ್ದಾಮ ಗ್ರಂಥಗಳು.

	ಭಾರತದ ಧಾರ್ಮಿಕ ಚರಿತ್ರೆಯ ಅಧ್ಯಯನದಲ್ಲಿ ಯೂರೋಪಿಯನ್ನರ ಆಸಕ್ತಿ ಕೆರಳಲು ಈತನೇ ಕಾರಣ. ಈತ ಸುಮಾರು 500 ಜೈನ ಗ್ರಂಥಗಳನ್ನು ಖರೀದಿಸಿ ಬರ್ಲಿನ್‍ಗೆ ಕಳುಹಿಸಿದ್ದ. ಇದರಿಂದಾಗಿ ಬರ್ಲಿನ್ ಜೈನ ಭಾಷಾಶಾಸ್ತ್ರದ ಕೇಂದ್ರವಾಯಿತು.
(ಎಚ್.ವಿ.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ